ಕಾಚುಗುಣ ನಾಶ

ಕಾಚಿನ ಅಥವಾ ಗಾಜಿನ ಗುಣವನ್ನು ನಾಶಪಡಿಸುವಿಕೆ (ಡೀವಿಟ್ರಿಫಿಕೇಶನ್). ದ್ರವಗಳು ಶೀಘ್ರವಾಗಿಯೂ ಅತಿಯಾಗಿಯೂ ಆರಿದಾಗ ಕಾಚಾಗುತ್ತವೆ. ಕಾಚಿನಲ್ಲಿ ಕಣಗಳ ರಚನೆ ಅಸ್ತವ್ಯಸ್ತ. ಕಣ ರಚನೆ ಹರಳುಗಳ ರಚನೆಯಿಂದ ಭಿನ್ನ. ಇಂಥ ಅಸ್ತವ್ಯಸ್ತ ರಚನೆ ಕಾಚಿಗೆ ಶಾಶ್ವತವಲ್ಲ. ಬಹಳ ಕಾಲದ ಮೇಲೆ ಕಾಚಿನಲ್ಲಿನ ಕಣಗಳ ರಚನೆಯಲ್ಲಿ ಬದಲಾವಣೆ ಉಂಟಾಗುವುದು. ಇದರಿಂದಾಗಿ ಆ ಕಣಗಳು ವ್ಯವಸ್ಥಿತವಾಗಿ ಸೂಕ್ಷ್ಮ ಹರಳುಗಳಾಗುತ್ತವೆ. ಅಥವಾ ಒಂದು ಕೇಂದ್ರದಿಂದ ಪ್ರಸರಿಸುವ ಉದ್ದುದ್ದವಾದ ಹರಳುಗಳ ಸಮೂಹವಾಗುತ್ತವೆ. ಇದನ್ನು ಕಾಚುಗುಣನಾಶನವೆಂದು ಹೇಳಬಹುದು. ಈ ಬದಲಾವಣೆ ಬಲು ನಿಧಾನವಾದದ್ದು. ಆದರೆ ಹೆಚ್ಚಿನ ಒತ್ತಡ, ಉಷ್ಣ ಇಲ್ಲವೆ ಕಂಪನಗಳು ಇದನ್ನು ತ್ವರಿತಗೊಳಿಸಬಲ್ಲವು. ಕಾಚುಗುಣನಾಶ ಪುರಾತನಕಾಲದ ಅಗ್ನಿಪರ್ವತಗಳಿಂದ ಹೊರಹೊಮ್ಮಿದ ಶಿಲೆಗಳಲ್ಲಿ ಸಾಮಾನ್ಯ. ಹಳೆಯ ಗಾಜುಗಳಲ್ಲಿಯೂ ಈ ಗುಣ ಕಾಣಬರುತ್ತದೆ. ಈ ಬದಲಾವಣೆಯಿಂದಾಗಿ ಗಾಜಿನ ಪಾರಕತ್ವ ನಾಶವಾಗುವುದು. ಅಲ್ಲದೆ ಅದರ ಪ್ರಮಾಣ ಕುಗ್ಗಿ ಅನೇಕ ಬಿರುಕುಗಳು ಉಂಟಾಗುತ್ತವೆ. ಇದರಿಂದಾಗಿ ಶಿಲೆಗಳಲ್ಲಿಯೂ ಅವುಗಳ ಘನಪ್ರಮಾಣ ಕಡಿಮೆಯಾಗಿ ವರ್ತುಲಾಕಾರದ ಬಿರುಕುಗಳು ಉದ್ಭವಿಸುವುವು. ಈ ರೀತಿ ಬದಲಾವಣೆಗೊಂಡ ಶಿಲೆಗಳನ್ನು ಫೆಲ್ಸೈಟ್ ಎಂದು ಕರೆಯುವರು.

 ಕಾಚುಗುಣ ಒಂದು ವಸ್ತುವಿನ ಭೌತಸ್ವರೂಪವನ್ನು ಸೂಚಿಸುವುದೇ ವಿನಾ ಅದರ ಸಂಯೋಜನೆಯನ್ನಲ್ಲ, ಅನೇಕ ವೇಳೆ ಎರಕ ಹೊಯ್ದ ಕಬ್ಬಿಣದ ತೊಲೆಗಳು ಮತ್ತು ಇತರ ಲೋಹಗಳ ವಸ್ತುಗಳೂ ಕಾಚಿನ ರೂಪದಲ್ಲಿರುತ್ತವೆ. ಕೆಲವು ವೇಳೆ ಸೇತುವೆಗಳ ಕಬ್ಬಿಣದ ತೊಲೆಗಳು ಅವುಗಳ ಮೇಲಿನ ರಭಸವಾದ ವಾಹನ ಸಂಚಾರದಿಂದಾಗಿ ಸ್ವಲ್ಪಕಾಲದ ಮೇಲೆ ಕಾಚುಗುಣನಾಶವನ್ನು ಹೊಂದುತ್ತವೆ. ಇದರಿಂದ ಅವುಗಳ ಶಕ್ತಿ ಕುಗ್ಗಿ ಸೇತುವೆ ಅನುಪಯುಕ್ತವಾಗುವುದು.

 

(ಎಂ.ಎಸ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ